27 November 2017

ರಾಜಕೀಯ/ಆರ್ಥಿಕ ಸಿದ್ಧಾಂತಗಳು

ರಾಜಕೀಯ/ಆರ್ಥಿಕ ಸಿದ್ಧಾಂತಗಳು:

19 November 2017

ಹಣಕಾಸು ವ್ಯವಸ್ಥೆ, ಅರ್ಥವ್ಯವಸ್ಥೆ ಮತ್ತು ಸಾಲ ಮನ್ನಾ

ಸಮಾಜದಲ್ಲಿ ಅನೇಕ ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಕೃಷಿಗೆ ರೈತರು ಟ್ರ್ಯಾಕ್ಟರುಗಳನ್ನು ಖರೀದಿಸುತ್ತಾರೆ, ಕೈಗಾರಿಕೆಗೆ ಉದ್ಯಮಿಗಳು ಕಾರ್ಖಾನೆಗಳನ್ನು ಕಟ್ಟಿಸುತ್ತಾರೆ, ವಾಣಿಜ್ಯಕ್ಕೆ ವ್ಯಾಪಾರಿಗಳು ಕಂಪನಿಗಳನ್ನು ಶುರು ಮಾಡುತ್ತಾರೆ. ಈ ಆರ್ಥಿಕ ಚಟುವಟಿಕೆಗಳು ಆರಂಭವಾದ ನಂತರ ಆದಾಯ ಗಳಿಸುತ್ತವೆ. ಆದರೆ ಅವುಗಳನ್ನು ಆರಂಭಿಸಲು ಹಣ ಬೇಕು. ಈ ಹಣ ಎಲ್ಲಿಂದ ಬರುತ್ತದೆ? ಶ್ರೀಮಂತರ ಬಳಿ ಹಣ ಇದೆ, ಆದರೆ ಸಾಮಾನ್ಯ ಜನರ ಬಳಿ ಇಲ್ಲ. ಆದ್ದರಿಂದ, ಸಾಮಾನ್ಯ ಜನರಿಗೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಹಣ ಕೊಡಿಸುವ ಒಂದು ವ್ಯವಸ್ಥೆ ಬೇಕು. ಆ ವ್ಯವಸ್ಥೆಯೇ ಹಣಕಾಸು ವ್ಯವಸ್ಥೆ.

ಶರೀರ ಕೆಲಸ ಮಾಡಲು ಅದರ ಜೀವಕೋಶಗಳಿಗೆ ರಕ್ತ ಬೇಕು. ರಕ್ತಪರಿಚಲನಾ ವ್ಯವಸ್ಥೆ ಶರೀರದ ಜೀವಕೋಶಗಳಿಗೆ ರಕ್ತ ತಲುಪಿಸುತ್ತದೆ. ಶರೀರಕ್ಕೆ ರಕ್ತ ಹೇಗೋ, ಅರ್ಥವ್ಯವಸ್ಥೆಗೆ ಹಣ ಹಾಗೆಯೇ. ಅರ್ಥವ್ಯವಸ್ಥೆ ಕೆಲಸ ಮಾಡಲು ಅದಕ್ಕೆ ಹಣ ಬೇಕು. ಈ ಹಣವನ್ನು ಪೂರೈಸುವುದು ಹಣಕಾಸು ವ್ಯವಸ್ಥೆ. ಅಂದರೆ - ಶರೀರಕ್ಕೆ ರಕ್ತಪರಿಚಲನಾ ವ್ಯವಸ್ಥೆ ಹೇಗೋ, ಅರ್ಥವ್ಯವಸ್ಥೆಗೆ ಹಣಕಾಸು ವ್ಯವಸ್ಥೆ ಹಾಗೆಯೇ. ಅಥವಾ - ಹಣಕಾಸು ವ್ಯವಸ್ಥೆ ಅರ್ಥವ್ಯವಸ್ಥೆಯ ರಕ್ತಪರಿಚಲನಾ ವ್ಯವಸ್ಥೆ ಇದ್ದ ಹಾಗೆ. ಹಣಕಾಸು ವ್ಯವಸ್ಥೆಯ ಪ್ರಮುಖ ಭಾಗ ಎಂದರೆ ಬ್ಯಾಂಕುಗಳು. ಬೇರೆ ಭಾಗಗಳೂ ಇವೆ, ಉದಾಹರಣೆ: ಶೇರುಮಾರುಕಟ್ಟೆ.

ಜನ ತಮ್ಮ ಉಳಿತಾಯವನ್ನು ಬ್ಯಾಂಕುಗಳಲ್ಲಿ ಇಡುತ್ತಾರೆ. ಬ್ಯಾಂಕುಗಳು ಈ ಹಣವನ್ನು ಅವಶ್ಯಕತೆ ಇರುವವರಿಗೆ (ರೈತರು, ಉದ್ಯಮಿಗಳು, ವ್ಯಾಪಾರಿಗಳು) ಸಾಲದ ರೂಪದಲ್ಲಿ ನೀಡುತ್ತವೆ. ನಂತರ ಇವರು ತಮ್ಮ ಆರ್ಥಿಕ ಚಟುವಟಿಕೆಗಳಿಂದ ಬಂದ ಆದಾಯದಿಂದ ಬ್ಯಾಂಕುಗಳಿಗೆ ತಾವು ತೆಗೆದುಕೊಂಡ ಸಾಲಗಳನ್ನು ತೀರಿಸುತ್ತಾರೆ. ಹೀಗೆ ಹಣಕಾಸು ವ್ಯವಸ್ಥೆಯ ಈ ಚಕ್ರ ತಿರುಗುತ್ತಲೇ ಇರುತ್ತದೆ. ಮತ್ತು ಅರ್ಥವ್ಯವಸ್ಥೆಯ ಯಂತ್ರ ನಡೆಯುತ್ತಲೇ ಇರುತ್ತದೆ.

ಈಗ ಸಾಲ ಮನ್ನಾ ಮಾಡಿದರೆ ಏನಾಗುತ್ತದೆ? ಆಗ ಸಾಲ ತೆಗೆದುಕೊಂಡವರು ತಮ್ಮ ಸಾಲಗಳನ್ನು ತೀರಿಸ ಬೇಕಾಗಿಲ್ಲ. ಅದರ ಪರಿಣಾಮ ಏನಾಗುತ್ತದೆ? ಆಗ ಬ್ಯಾಂಕುಗಳು ಸಾಲಗಳನ್ನು ಕೊಡುವುದನ್ನು ನಿಲ್ಲಿಸುತ್ತವೆ. ಅಂದರೆ ಹಣಕಾಸು ವ್ಯವಸ್ಥೆಯ ಚಕ್ರ ತಿರುಗುವುದು ನಿಲ್ಲುತ್ತದೆ. ಯಾರಿಗೆ ಆರ್ಥಿಕ ಚಟುವಟಿಕೆಗಳಿಗೆ ಹಣ ಬೇಕು (ರೈತರು, ಉದ್ಯಮಿಗಳು, ವ್ಯಾಪಾರಿಗಳು) ಅವರಿಗೆ ಅದು ಸಿಗುವುದಿಲ್ಲ. ಆಗ ಅವರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿರುವುದಿಲ್ಲ. ರೈತರು ಟ್ರ್ಯಾಕ್ಟರುಗಳನ್ನು ಖರೀದಿಸಲು ಆಗಲ್ಲ, ಉದ್ಯಮಿಗಳು ಕಾರ್ಖಾನೆಗಳನ್ನು ಕಟ್ಟಿಸಲು ಆಗಲ್ಲ, ವ್ಯಾಪಾರಿಗಳು ಕಂಪನಿಗಳನ್ನು ಶುರು ಮಾಡಲು ಆಗಲ್ಲ. ಅಂದರೆ - ಇಡೀ ಅರ್ಥವ್ಯವಸ್ಥೆಯ ಯಂತ್ರವೇ ನಿಂತು ಹೋಗುತ್ತದೆ.

'ಅರ್ಥವ್ಯವಸ್ಥೆ' ಎಂದರೆ ದೊಡ್ಡ ಕಂಪನಿಗಳ ದೊಡ್ಡ ಅಧಿಕಾರಿಗಳು ದೊಡ್ಡ ಕಚೇರಿಗಳಲ್ಲಿ ಕುಳಿತಿರುವುದು ಅಲ್ಲ. ಅಥವಾ ಶೇರುಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೂಗಾಡುವುದು ಅಲ್ಲ. ಅರ್ಥವ್ಯವಸ್ಥೆ ಎಂದರೇನು? ರೈತರು ತಮ್ಮ ಹೊಲ-ಗದ್ದೆ-ತೋಟಗಳಲ್ಲಿ ಅಕ್ಕಿ-ಬೇಳೆ-ತರಕಾರಿಗಳನ್ನು ಬೆಳೆಯುತ್ತಾರೆ. ಇದು ಅರ್ಥವ್ಯವಸ್ಥೆ. ಮತ್ತು ನಾವು ನಮ್ಮ ಕಚೇರಿ-ಕಾರ್ಖಾನೆಗಳಲ್ಲಿ ಕೆಲಸ ಮಾಡಿ, ಸಂಬಳ ಪಡೆದು, ಈ ಸಂಬಳದಿಂದ ಆ ಅಕ್ಕಿ-ಬೇಳೆ-ತರಕಾರಿಗಳನ್ನು ಕೊಳ್ಳುತ್ತೇವೆ. ಇದು ಅರ್ಥವ್ಯವಸ್ಥೆ. ಈ ವ್ಯವಸ್ಥೆ ಇಲ್ಲದೆ ನಾವು ಬದುಕುವುದೂ ಸಾಧ್ಯವಿಲ್ಲ. ಆದರೆ ನಾವು ಈ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲ. ನಾವು ಏನು ಮಾಡಿದರೂ ಈ ವ್ಯವಸ್ಥೆ ಸರಿಯಾಗಿಯೇ ನಡೆಯುತ್ತದೆ ಎಂದು ಭಾವಿಸಿದ್ದೇವೆ. ಇದಕ್ಕಿಂತ ದೊಡ್ಡ ಭ್ರಮೆ ಇನ್ನೊಂದಿಲ್ಲ. ಈ ವ್ಯವಸ್ಥೆಯ ಕೆಲವು ಆಧಾರಸ್ತಂಭಗಳಿವೆ. ಅವುಗಳಲ್ಲಿ ಒಂದು ಎಂದರೆ: ಸಾಲ ತೆಗೆದುಕೊಂಡವನು ತನ್ನ ಸಾಲವನ್ನು ತೀರಿಸಬೇಕೆಂಬ ಪವಿತ್ರ ಧರ್ಮ. ಸಾಲ ಮನ್ನಾ ಈ ಆಧಾರಸ್ತಂಭವನ್ನು ಚೂರುಚೂರು ಮಾಡುತ್ತದೆ. ಇದರಿಂದ ಇಡೀ ಅರ್ಥವ್ಯವಸ್ಥೆಯೇ ಕುಸಿದು ಬೀಳುತ್ತದೆ.

ನಮ್ಮ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ, ನಿಜ. ನಾವು ಅವರಿಗೆ ಪರಿಹಾರ ನೀಡಲೇಬೇಕು. ಆದರೆ ಸಾಲ ಮನ್ನಾ ಎಲ್ಲಕ್ಕಿಂತ ನಿರುಪಯೋಗಿ ಹಾಗೂ ಹಾನಿಕರ 'ಪರಿಹಾರ'. ಏಕೆಂದರೆ ಸಾಲ ಮನ್ನಾ ಅರ್ಥವ್ಯವಸ್ಥೆಯನ್ನು ನಾಶ ಮಾಡುತ್ತದೆ, ಮತ್ತು ರೈತರು ಅರ್ಥವ್ಯವಸ್ಥೆಯಲ್ಲಿ ಅತಿ ಸೂಕ್ಷ್ಮ ಸ್ಥಿತಿಯಲ್ಲಿರುವುದರಿಂದ ಅವರಿಗೇ ಇದರಿಂದ ಹೆಚ್ಚು ಹಾನಿ ಆಗುತ್ತದೆ. ನಮಗೆ ರೈತರ ಬಗ್ಗೆ ಅಷ್ಟೊಂದು ಕನಿಕರ ಇದ್ದರೆ, ನಾವು ಎಲ್ಲಾ ರೈತರಿಗೆ ಸಹಾಯಧನ ನೀಡಬೇಕು. ಯಾರು ತಮ್ಮ ಸಾಲಗಳನ್ನು ತೀರಿಸಿದ್ದಾರೋ, ಅವರಿಗೂ ನೀಡಬೇಕು. ಅಷ್ಟೇ ಅಲ್ಲ - ಯಾರು ಸಾಲವನ್ನೇ ಮಾಡಿಲ್ಲವೋ, ಅವರಿಗೂ ನೀಡಬೇಕು. ಆಗ ಹಣಕಾಸು ವ್ಯವಸ್ಥೆ ಮತ್ತು ಅರ್ಥವ್ಯವಸ್ಥೆಯನ್ನು ನಾಶ ಮಾಡದೇ ರೈತರಿಗೆ ಸಹಾಯ ಮಾಡಿದಂತಾಗುತ್ತದೆ.

15 November 2017

ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆ

ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಬೆಲೆಗಳನ್ನು ಮಾರುಕಟ್ಟೆ ಶಕ್ತಿಗಳು (ಅಂದರೆ ಬೇಡಿಕೆ ಮತ್ತು ಪೂರೈಕೆ) ನಿಯಂತ್ರಿಸುತ್ತವೆ. ಅಂದರೆ ಈ ವ್ಯವಸ್ಥೆಯಲ್ಲಿ ಒಂದು ವಸ್ತುವಿನ ಬೆಲೆಯನ್ನು ಅದರ ಬೇಡಿಕೆ ಮತ್ತು ಪೂರೈಕೆ ನಿರ್ಧರಿಸುತ್ತವೆ. ವಸ್ತುವಿನ ಬೇಡಿಕೆ ಜಾಸ್ತಿ ಇದ್ದರೆ ಅಥವಾ/ಮತ್ತು ಪೂರೈಕೆ ಕಮ್ಮಿ ಇದ್ದರೆ, ಅದರ ಬೆಲೆ ಜಾಸ್ತಿ ಇರುತ್ತದೆ. ವಸ್ತುವಿನ ಬೇಡಿಕೆ ಕಮ್ಮಿ ಇದ್ದರೆ ಅಥವಾ/ಮತ್ತು ಪೂರೈಕೆ ಜಾಸ್ತಿ ಇದ್ದರೆ, ಅದರ ಬೆಲೆ ಕಮ್ಮಿ ಇರುತ್ತದೆ.

ಹೀಗೆ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯು ಎಲ್ಲ ವಸ್ತುಗಳ ಬೆಲೆಗಳನ್ನು ನಿರ್ಧರಿಸುತ್ತದೆ. ಅಷ್ಟೇ ಅಲ್ಲ, ಅದು ಮತ್ತೊಂದು ಕೆಲಸವನ್ನೂ ಮಾಡುತ್ತದೆ. ಅದು ಏನೆಂದರೆ: ಜನ ಬಯಸುವ ವಸ್ತುಗಳನ್ನು ಬೇಕಾಗಿರುವ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಉದಾಹರಣೆ: ಜನ ಒಂದು ವಸ್ತುವನ್ನು ಬಹಳ ಬಯಸುತ್ತಾರೆ, ಆದರೆ ಅದರ ಉತ್ಪಾದನೆ ಕಡಿಮೆ ಇದೆ. ಅಂದರೆ, ಅದರ ಬೇಡಿಕೆ ಜಾಸ್ತಿ ಇದೆ ಮತ್ತು ಪೂರೈಕೆ ಕಮ್ಮಿ ಇದೆ. ಆಗ ಏನಾಗುತ್ತದೆ? ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯುಲ್ಲಿ ಅದರ ಬೆಲೆ ಜಾಸ್ತಿ ಇರುತ್ತದೆ. ಜಾಸ್ತಿ ಬೆಲೆ ಎಂದರೆ ಜಾಸ್ತಿ ಲಾಭ. ಆಗ ಆ ಜಾಸ್ತಿ ಲಾಭವನ್ನು ಗಳಿಸಲು ಬೇರೆ ಉತ್ಪಾದಕರು ಆ ವಸ್ತುವನ್ನು ತಯಾರಿಸಲು ಶುರು ಮಾಡುತ್ತಾರೆ. ಆಗ ಉತ್ಪಾದನೆ ಹೆಚ್ಚುತ್ತದೆ. ಆದ್ದರಿಂದ (ಜನ ಬಹಳ ಬಯಸುವ) ಈ ವಸ್ತು ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲ - ಈ ವಸ್ತುವಿನ ಪೂರೈಕೆ ಹೆಚ್ಚಿದರಿಂದ ಇದರ ಬೆಲೆ ಕಮ್ಮಿಯಾಗುತ್ತದೆ (ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯುಲ್ಲಿ). ಆದುದರಿಂದ ಜನ ತಾವು ಬಯಸುವ ವಸ್ತುವನ್ನು ಹೆಚ್ಚು ಪ್ರಮಾಣದಲ್ಲಿ ಪಡೆಯುತ್ತಾರೆ ಮತ್ತು ಅದನ್ನು ಕಡಿಮೆ ಬೆಲೆಯಲ್ಲಿ ಪಡೆಯುತ್ತಾರೆ. ಹೀಗಾಗಿ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯ ಎರಡು ಲಾಭಗಳಿವೆ.

ಆದ್ದರಿಂದ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಬೆಲೆಗಳು ಎರಡು ಕೆಲಸಗಳನ್ನು ಮಾಡುತ್ತವೆ:
1. ಅವು ಎಲ್ಲ ವಸ್ತುಗಳ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ಮಾಹಿತಿ ನೀಡುತ್ತವೆ.
2. ಅವು ಜನ ಬಯಸುವ ವಸ್ತುಗಳನ್ನು ತಯಾರಿಸಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುತ್ತವೆ.

ಕೆಲವು ವಸ್ತುಗಳ ಬೆಲೆ ಬಹಳ ಜಾಸ್ತಿ ಇರುತ್ತದೆ. ಇದರ ಅರ್ಥ ಈ ವಸ್ತುಗಳನ್ನು ತಯಾರಿಸುವುದು ಬಹಳ ಕಷ್ಟ ಮತ್ತು ದುಬಾರಿ. "ಈ ವಸ್ತುವಿನ ಬೆಲೆ ಇದನ್ನು ತಯಾರಿಸುವ ಶ್ರಮ ಮತ್ತು ಖರ್ಚಿಗಿಂತ ಬಹಳ ಜಾಸ್ತಿ" ಎಂದು ನಮಗೆ ಹಲವು ಬಾರಿ ಅನಿಸುತ್ತದೆ. ನಮ್ಮ ಅನಿಸಿಕೆ ಸರಿಯಿದ್ದರೆ ಆ ವಸ್ತುವಿನ ಲಾಭ ಬಹಳ ಜಾಸ್ತಿ ಇರುತ್ತದೆ. ಆಗ ಆ ಅಧಿಕ ಲಾಭವನ್ನು ಗಳಿಸಲು, ಬೇರೆ ಉತ್ಪಾದಕರು ಆ ವಸ್ತುವನ್ನು ತಯಾರಿಸಲು ಶುರು ಮಾಡಬೇಕು. ಇದರಿಂದ ಆ ವಸ್ತುವಿನ ಪೂರೈಕೆ ಹೆಚ್ಚುತ್ತದೆ - ಮತ್ತು ಅದರ ಬೆಲೆ ಇಳಿಯುತ್ತದೆ. ವಸ್ತುವಿನ ಬೆಲೆ ಈಗಲೂ ಜಾಸ್ತಿ ಇದ್ದರೆ, ಈ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅರ್ಥ. ಇದಕ್ಕೆ ಕಾರಣ ಏನು?
1) ನಮ್ಮ ಅನಿಸಿಕೆ ತಪ್ಪು. ಅಂದರೆ ಆ ವಸ್ತುವನ್ನು ತಯಾರಿಸುವ ಶ್ರಮ ಮತ್ತು ಖರ್ಚಿನ ಬಗ್ಗೆ ನಮ್ಮ ಅಂದಾಜು ತಪ್ಪು. ಆ ವಸ್ತುವನ್ನು ತಯಾರಿಸುವುದು ನಮ್ಮ ಅಂದಾಜಿಗಿಂತ ಹೆಚ್ಚು ಕಷ್ಟ ಮತ್ತು ದುಬಾರಿ. ಆದ್ದರಿಂದ ಅದರ 'ಜಾಸ್ತಿ' ಬೆಲೆ ಸರಿಯಾಗಿಯೇ ಇದೆ.
ಅಥವಾ
2) ಬೇರೆ ಉತ್ಪಾದಕರು ಆ ವಸ್ತುವನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಅಂದರೆ ಕ್ಷೇತ್ರದಲ್ಲಿ ಮುಕ್ತ ಸ್ಫರ್ಧೆ ಇಲ್ಲ ಮತ್ತು ಹೊಸ ಉತ್ಪಾದಕರಿಗೆ ಸುಲಭ ಪ್ರವೇಶ ಇಲ್ಲ.

"ದುಬಾರಿ ವಸ್ತುಗಳ ಬೆಲೆಗಳನ್ನು ಸರ್ಕಾರ ನಿಯಂತ್ರಿಸಬೇಕು" ಎಂದು ಕೆಲವರು ಹೇಳುತ್ತಾರೆ. ಸರ್ಕಾರ ಬೆಲೆಗಳನ್ನು ನಿಯಂತ್ರಿಸಿದರೆ ಏನಾಗುತ್ತದೆ? ಆಗ ಮೇಲೆ ವಿವರಿಸಿದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುತ್ತದೆ. ಮಾರುಕಟ್ಟೆ ಶಕ್ತಿಗಳ ಬದಲು ಸರ್ಕಾರ ಬೆಲೆಗಳನ್ನು ನಿಯಂತ್ರಿಸಿದರೆ ಬೆಲೆಗಳು ತಮ್ಮ ಎರಡು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅಂದರೆ ಅವು ಉತ್ಪಾದಕರಿಗೆ ವಸ್ತುಗಳನ್ನು ತಯಾರಿಸಲು ಮಾಹಿತಿ ಮತ್ತು ಪ್ರೋತ್ಸಾಹ ನೀಡುವುದಿಲ್ಲ. ಆಗ ಬೆಲೆಗಳು ಕಮ್ಮಿ ಇರುತ್ತವೆ, ನಿಜ - ಆದರೆ ಉತ್ಪಾದನೆಯೂ ಕಮ್ಮಿ ಇರುತ್ತದೆ. ಆಗ ಆ ವಸ್ತುಗಳನ್ನು ಬಯಸುವ ಎಲ್ಲ ಜನರಿಗೂ ಅವು ಸಿಗುವುದಿಲ್ಲ. ಕೆಲವರಿಗೆ ಮಾತ್ರ ಸಿಗುತ್ತವೆ, ಬೇರೆಯವರಿಗೆ ಸಿಗುವುದಿಲ್ಲ - ಅವರ ಬಳಿ ಅವುಗಳನ್ನು ಖರೀದಿಸುವ ಹಣ ಇದ್ದರೂ ಕೂಡ. ಇದೇ 'ಸಮಾಜವಾದಿ' ಅರ್ಥವ್ಯವಸ್ಥೆ. ಇದು ಅತ್ಯಂತ ಅದಕ್ಷ ಅರ್ಥವ್ಯವಸ್ಥೆ. ಇದರ ಅತ್ಯುತ್ತಮ ಉದಾಹರಣೆ ಎಂದರೆ ಸೋವಿಯೆಟ್ ಸಂಘ. ಅಲ್ಲಿ ಪರಿಪೂರ್ಣ ಸಮಾಜವಾದಿ ಅರ್ಥವ್ಯವಸ್ಥೆ ಇತ್ತು. ಸರ್ಕಾರ ಎಲ್ಲ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುತ್ತಿತ್ತು: ಅಕ್ಕಿ-ಬೇಳೆ-ತರಕಾರಿಯಿಂದ ಹಿಡಿದು ಬೈಕು-ಕಾರು-ಕಂಪ್ಯೂಟರಿನವರೆಗೂ. ಕೊನೆಗೆ ಏನಾಯಿತು ಅಂತ ಎಲ್ಲರಿಗೂ ಗೊತ್ತು. ಆ ದೇಶ ವಿಶ್ವಶಕ್ತಿಯಾಗಿದ್ದರೂ 1991ರಲ್ಲಿ ಸಂಪೂರ್ಣವಾಗಿ ಕುಸಿದು ಬಿತ್ತು. ಒಂದು ಅರ್ಥವ್ಯವಸ್ಥೆಯ (ಇಲ್ಲಿ ಸಮಾಜವಾದ) ಅದಕ್ಷತೆಯನ್ನು ಸಾಬೀತು ಪಡಿಸಿಲು ಇದಕ್ಕಿಂತ ಬಲವಾದ ಸಾಕ್ಷಿ ಸಿಗುವುದು ಅಸಾಧ್ಯ.

ಅಧಿಕ ಬೆಲೆಗಳಿಗೆ ಪರಿಹಾರ ಸರ್ಕಾರಿ ನಿಯಂತ್ರಣ ಅಲ್ಲ. ಅಧಿಕ ಬೆಲೆ ಸಮಸ್ಯೆ ಅಲ್ಲ - ಅದು ಕೇವಲ ಸಮಸ್ಯೆಯ ಲಕ್ಷಣ. ನಿಜವಾದ ಸಮಸ್ಯೆ ಎಂದರೆ ಕಡಿಮೆ ಉತ್ಪಾದನೆ. ಮತ್ತು ಇದಕ್ಕೆ ಕಾರಣ ಕ್ಷೇತ್ರದಲ್ಲಿ ಮುಕ್ತ ಸ್ಫರ್ಧೆ ಇಲ್ಲದಿರುವುದು ಹಾಗೂ ಹೊಸ ಉತ್ಪಾದಕರಿಗೆ ಸುಲಭ ಪ್ರವೇಶ ಇಲ್ಲದಿರುವುದು. ಆದ್ದರಿಂದ ನಿಜವಾದ ಪರಿಹಾರ ಎಂದರೆ ಕ್ಷೇತ್ರದಲ್ಲಿ ಮುಕ್ತ ಸ್ಫರ್ಧೆ ಮತ್ತು ಹೊಸ ಉತ್ಪಾದಕರಿಗೆ ಸುಲಭ ಪ್ರವೇಶ ತರುವುದು. ಆಗ ಉತ್ಪಾದನೆಯೂ ಹೆಚ್ಚುತ್ತದೆ ಮತ್ತು ಬೆಲೆಗಳೂ ಇಳಿಯುತ್ತವೆ. ಇದರ ಬದಲು ಏನಾದರೂ ಸರ್ಕಾರ ಬೆಲೆಗಳನ್ನು ನಿಯಂತ್ರಿಸಿದರೆ, ಅದು ಒಬ್ಬ ರೋಗಿಗೆ ಔಷಧಿಯ ಬದಲು ವಿಷ ಕುಡಿಸಿದಂತಾಗುತ್ತದೆ.

05 November 2017

ಬಹುಸತ್ಯವಾದ ಮತ್ತು ಏಕಸತ್ಯವಾದ

ಸತ್ಯ ಏನು? ಇದು ಮಾನವನ ಅತ್ಯಂತ ಮೂಲಭೂತ ಪ್ರಶ್ನೆ. ಇದಕ್ಕೆ ಎರಡು ಮೂಲಭೂತ ಉತ್ತರಗಳಿವೆ:
1) ಅನೇಕ ಸತ್ಯಗಳು ಇವೆ
2) ಒಂದೇ ಸತ್ಯ ಇದೆ

ಈ ಎರಡು ಮೂಲಭೂತ ದೃಷ್ಟಿಗಳಿಂದ ಎರಡು ಮೂಲಭೂತ ಸಿದ್ಧಾಂತಗಳು ಮೂಡುತ್ತವೆ:
1) ಬಹುಸತ್ಯವಾದ
2) ಏಕಸತ್ಯವಾದ

ವಿಶ್ವದ ಎಲ್ಲ ಪ್ರಮುಖ ನಾಗರಿಕತೆಗಳು ಜನಿಸಿದ್ದು ಏಷ್ಯಾ ಖಂಡದಲ್ಲಿ. ಇಲ್ಲಿ ಮೂರು ಪ್ರಮುಖ ಭೂಭಾಗಗಳಿವೆ:
1. ಭಾರತ
2. ಪೂರ್ವ ಏಷ್ಯಾ
3. ಪಶ್ಚಿಮ ಏಷ್ಯಾ

ಭಾರತ ಮತ್ತು ಪೂರ್ವ ಏಷ್ಯಾದ ಮೂಲಭೂತ ಸಿದ್ಧಾಂತ ಬಹುಸತ್ಯವಾದ. ಪಶ್ಚಿಮ ಏಷ್ಯಾದ ಮೂಲಭೂತ ಸಿದ್ಧಾಂತ ಏಕಸತ್ಯವಾದ. ಭಾರತದ ಬಹುಸತ್ಯವಾದಿ ದೃಷ್ಟಿ ಒಂದು ಬಹುಸತ್ಯವಾದಿ ಜೀವನ ವಿಧಾನವನ್ನು ಸೃಷ್ಟಿಸಿತು. ಅದರ ಹೆಸರು 'ಹಿಂದು ಧರ್ಮ'.

ಈ ಮೂರು ಭೂಭಾಗಗಳಲ್ಲಿ ಅನೇಕ ಮತಗಳು ಜನಿಸಿದವು:
1. ಭಾರತ: ಶೈವ, ವೈಷ್ಣವ, ಶಾಕ್ತ, ಬೌದ್ಧ, ಜೈನ, ಸಿಖ್
2. ಪೂರ್ವ ಏಷ್ಯಾ: ಕನ್ಫ್ಯೂಷಿಯನ್, ತಾವೋ, ಶಿಂತೋ
3. ಪಶ್ಚಿಮ ಏಷ್ಯಾ: ಯಹೂದಿ, ಕ್ರೈಸ್ತ, ಇಸ್ಲಾಂ

ಬಹುಸತ್ಯವಾದಿ ಮತಗಳ ಎರಡು ಮೂಲಭೂತ ಲಕ್ಷಣಗಳು:
1. ಅನೇಕ ದೇವರುಗಳನ್ನು ಪೂಜಿಸುವುದು
2. ಬೇರೆ ಮತಗಳನ್ನು ಸಹಿಸುವುದು
ಏಕಸತ್ಯವಾದಿ ಮತಗಳ ಎರಡು ಮೂಲಭೂತ ಲಕ್ಷಣಗಳು:
1. ಒಂದೇ ದೇವರನ್ನು ಪೂಜಿಸುವುದು
2. ಬೇರೆ ಮತಗಳನ್ನು ಸಹಿಸದಿರುವುದು

ಏಕಸತ್ಯವಾದಿ ಮತಗಳ ಮೂರು ಮೂಲಭೂತ ನಂಬಿಕೆಗಳಿವೆ:
1. ತಾನೊಂದೇ ಸತ್ಯ
2. ಬೇರೆ ಎಲ್ಲ ಮತಗಳು ಸುಳ್ಳು
3. ಆದ್ದರಿಂದ ತಾನು ಬೇರೆ ಎಲ್ಲ ಮತಗಳನ್ನು ಅಳಿಸಿಹಾಕಬೇಕು

ಈ ಮೂರು ನಂಬಿಕೆಗಳ ತಾರ್ಕಿಕ ಪರಿಣಾಮ ಸಾಮ್ರಾಜ್ಯವಾದ, ಅಂದರೆ:
1. ಬೇರೆ ಮತಗಳಿರುವ ದೇಶಗಳನ್ನು ಸೈನ್ಯದಿಂದ ಆಕ್ರಮಣ ಮಾಡಿ, ಗೆದ್ದು, ಆಳುವುದು
2. ಅಲ್ಲಿನ ಜನರನ್ನು ತನ್ನ ಮತಕ್ಕೆ ಮತಾಂತರ ಮಾಡುವುದು.