ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಬೆಲೆಗಳನ್ನು ಮಾರುಕಟ್ಟೆ ಶಕ್ತಿಗಳು (ಅಂದರೆ ಬೇಡಿಕೆ ಮತ್ತು ಪೂರೈಕೆ) ನಿಯಂತ್ರಿಸುತ್ತವೆ. ಅಂದರೆ ಈ ವ್ಯವಸ್ಥೆಯಲ್ಲಿ ಒಂದು ವಸ್ತುವಿನ ಬೆಲೆಯನ್ನು ಅದರ ಬೇಡಿಕೆ ಮತ್ತು ಪೂರೈಕೆ ನಿರ್ಧರಿಸುತ್ತವೆ. ವಸ್ತುವಿನ ಬೇಡಿಕೆ ಜಾಸ್ತಿ ಇದ್ದರೆ ಅಥವಾ/ಮತ್ತು ಪೂರೈಕೆ ಕಮ್ಮಿ ಇದ್ದರೆ, ಅದರ ಬೆಲೆ ಜಾಸ್ತಿ ಇರುತ್ತದೆ. ವಸ್ತುವಿನ ಬೇಡಿಕೆ ಕಮ್ಮಿ ಇದ್ದರೆ ಅಥವಾ/ಮತ್ತು ಪೂರೈಕೆ ಜಾಸ್ತಿ ಇದ್ದರೆ, ಅದರ ಬೆಲೆ ಕಮ್ಮಿ ಇರುತ್ತದೆ.
ಹೀಗೆ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯು ಎಲ್ಲ ವಸ್ತುಗಳ ಬೆಲೆಗಳನ್ನು ನಿರ್ಧರಿಸುತ್ತದೆ. ಅಷ್ಟೇ ಅಲ್ಲ, ಅದು ಮತ್ತೊಂದು ಕೆಲಸವನ್ನೂ ಮಾಡುತ್ತದೆ. ಅದು ಏನೆಂದರೆ: ಜನ ಬಯಸುವ ವಸ್ತುಗಳನ್ನು ಬೇಕಾಗಿರುವ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಉದಾಹರಣೆ: ಜನ ಒಂದು ವಸ್ತುವನ್ನು ಬಹಳ ಬಯಸುತ್ತಾರೆ, ಆದರೆ ಅದರ ಉತ್ಪಾದನೆ ಕಡಿಮೆ ಇದೆ. ಅಂದರೆ, ಅದರ ಬೇಡಿಕೆ ಜಾಸ್ತಿ ಇದೆ ಮತ್ತು ಪೂರೈಕೆ ಕಮ್ಮಿ ಇದೆ. ಆಗ ಏನಾಗುತ್ತದೆ? ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯುಲ್ಲಿ ಅದರ ಬೆಲೆ ಜಾಸ್ತಿ ಇರುತ್ತದೆ. ಜಾಸ್ತಿ ಬೆಲೆ ಎಂದರೆ ಜಾಸ್ತಿ ಲಾಭ. ಆಗ ಆ ಜಾಸ್ತಿ ಲಾಭವನ್ನು ಗಳಿಸಲು ಬೇರೆ ಉತ್ಪಾದಕರು ಆ ವಸ್ತುವನ್ನು ತಯಾರಿಸಲು ಶುರು ಮಾಡುತ್ತಾರೆ. ಆಗ ಉತ್ಪಾದನೆ ಹೆಚ್ಚುತ್ತದೆ. ಆದ್ದರಿಂದ (ಜನ ಬಹಳ ಬಯಸುವ) ಈ ವಸ್ತು ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲ - ಈ ವಸ್ತುವಿನ ಪೂರೈಕೆ ಹೆಚ್ಚಿದರಿಂದ ಇದರ ಬೆಲೆ ಕಮ್ಮಿಯಾಗುತ್ತದೆ (ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯುಲ್ಲಿ). ಆದುದರಿಂದ ಜನ ತಾವು ಬಯಸುವ ವಸ್ತುವನ್ನು ಹೆಚ್ಚು ಪ್ರಮಾಣದಲ್ಲಿ ಪಡೆಯುತ್ತಾರೆ ಮತ್ತು ಅದನ್ನು ಕಡಿಮೆ ಬೆಲೆಯಲ್ಲಿ ಪಡೆಯುತ್ತಾರೆ. ಹೀಗಾಗಿ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯ ಎರಡು ಲಾಭಗಳಿವೆ.
ಆದ್ದರಿಂದ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಬೆಲೆಗಳು ಎರಡು ಕೆಲಸಗಳನ್ನು ಮಾಡುತ್ತವೆ:
1. ಅವು ಎಲ್ಲ ವಸ್ತುಗಳ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ಮಾಹಿತಿ ನೀಡುತ್ತವೆ.
2. ಅವು ಜನ ಬಯಸುವ ವಸ್ತುಗಳನ್ನು ತಯಾರಿಸಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುತ್ತವೆ.
ಕೆಲವು ವಸ್ತುಗಳ ಬೆಲೆ ಬಹಳ ಜಾಸ್ತಿ ಇರುತ್ತದೆ. ಇದರ ಅರ್ಥ ಈ ವಸ್ತುಗಳನ್ನು ತಯಾರಿಸುವುದು ಬಹಳ ಕಷ್ಟ ಮತ್ತು ದುಬಾರಿ. "ಈ ವಸ್ತುವಿನ ಬೆಲೆ ಇದನ್ನು ತಯಾರಿಸುವ ಶ್ರಮ ಮತ್ತು ಖರ್ಚಿಗಿಂತ ಬಹಳ ಜಾಸ್ತಿ" ಎಂದು ನಮಗೆ ಹಲವು ಬಾರಿ ಅನಿಸುತ್ತದೆ. ನಮ್ಮ ಅನಿಸಿಕೆ ಸರಿಯಿದ್ದರೆ ಆ ವಸ್ತುವಿನ ಲಾಭ ಬಹಳ ಜಾಸ್ತಿ ಇರುತ್ತದೆ. ಆಗ ಆ ಅಧಿಕ ಲಾಭವನ್ನು ಗಳಿಸಲು, ಬೇರೆ ಉತ್ಪಾದಕರು ಆ ವಸ್ತುವನ್ನು ತಯಾರಿಸಲು ಶುರು ಮಾಡಬೇಕು. ಇದರಿಂದ ಆ ವಸ್ತುವಿನ ಪೂರೈಕೆ ಹೆಚ್ಚುತ್ತದೆ - ಮತ್ತು ಅದರ ಬೆಲೆ ಇಳಿಯುತ್ತದೆ. ವಸ್ತುವಿನ ಬೆಲೆ ಈಗಲೂ ಜಾಸ್ತಿ ಇದ್ದರೆ, ಈ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅರ್ಥ. ಇದಕ್ಕೆ ಕಾರಣ ಏನು?
1) ನಮ್ಮ ಅನಿಸಿಕೆ ತಪ್ಪು. ಅಂದರೆ ಆ ವಸ್ತುವನ್ನು ತಯಾರಿಸುವ ಶ್ರಮ ಮತ್ತು ಖರ್ಚಿನ ಬಗ್ಗೆ ನಮ್ಮ ಅಂದಾಜು ತಪ್ಪು. ಆ ವಸ್ತುವನ್ನು ತಯಾರಿಸುವುದು ನಮ್ಮ ಅಂದಾಜಿಗಿಂತ ಹೆಚ್ಚು ಕಷ್ಟ ಮತ್ತು ದುಬಾರಿ. ಆದ್ದರಿಂದ ಅದರ 'ಜಾಸ್ತಿ' ಬೆಲೆ ಸರಿಯಾಗಿಯೇ ಇದೆ.
ಅಥವಾ
2) ಬೇರೆ ಉತ್ಪಾದಕರು ಆ ವಸ್ತುವನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಅಂದರೆ ಕ್ಷೇತ್ರದಲ್ಲಿ ಮುಕ್ತ ಸ್ಫರ್ಧೆ ಇಲ್ಲ ಮತ್ತು ಹೊಸ ಉತ್ಪಾದಕರಿಗೆ ಸುಲಭ ಪ್ರವೇಶ ಇಲ್ಲ.
"ದುಬಾರಿ ವಸ್ತುಗಳ ಬೆಲೆಗಳನ್ನು ಸರ್ಕಾರ ನಿಯಂತ್ರಿಸಬೇಕು" ಎಂದು ಕೆಲವರು ಹೇಳುತ್ತಾರೆ. ಸರ್ಕಾರ ಬೆಲೆಗಳನ್ನು ನಿಯಂತ್ರಿಸಿದರೆ ಏನಾಗುತ್ತದೆ? ಆಗ ಮೇಲೆ ವಿವರಿಸಿದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುತ್ತದೆ. ಮಾರುಕಟ್ಟೆ ಶಕ್ತಿಗಳ ಬದಲು ಸರ್ಕಾರ ಬೆಲೆಗಳನ್ನು ನಿಯಂತ್ರಿಸಿದರೆ ಬೆಲೆಗಳು ತಮ್ಮ ಎರಡು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅಂದರೆ ಅವು ಉತ್ಪಾದಕರಿಗೆ ವಸ್ತುಗಳನ್ನು ತಯಾರಿಸಲು ಮಾಹಿತಿ ಮತ್ತು ಪ್ರೋತ್ಸಾಹ ನೀಡುವುದಿಲ್ಲ. ಆಗ ಬೆಲೆಗಳು ಕಮ್ಮಿ ಇರುತ್ತವೆ, ನಿಜ - ಆದರೆ ಉತ್ಪಾದನೆಯೂ ಕಮ್ಮಿ ಇರುತ್ತದೆ. ಆಗ ಆ ವಸ್ತುಗಳನ್ನು ಬಯಸುವ ಎಲ್ಲ ಜನರಿಗೂ ಅವು ಸಿಗುವುದಿಲ್ಲ. ಕೆಲವರಿಗೆ ಮಾತ್ರ ಸಿಗುತ್ತವೆ, ಬೇರೆಯವರಿಗೆ ಸಿಗುವುದಿಲ್ಲ - ಅವರ ಬಳಿ ಅವುಗಳನ್ನು ಖರೀದಿಸುವ ಹಣ ಇದ್ದರೂ ಕೂಡ. ಇದೇ 'ಸಮಾಜವಾದಿ' ಅರ್ಥವ್ಯವಸ್ಥೆ. ಇದು ಅತ್ಯಂತ ಅದಕ್ಷ ಅರ್ಥವ್ಯವಸ್ಥೆ. ಇದರ ಅತ್ಯುತ್ತಮ ಉದಾಹರಣೆ ಎಂದರೆ ಸೋವಿಯೆಟ್ ಸಂಘ. ಅಲ್ಲಿ ಪರಿಪೂರ್ಣ ಸಮಾಜವಾದಿ ಅರ್ಥವ್ಯವಸ್ಥೆ ಇತ್ತು. ಸರ್ಕಾರ ಎಲ್ಲ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುತ್ತಿತ್ತು: ಅಕ್ಕಿ-ಬೇಳೆ-ತರಕಾರಿಯಿಂದ ಹಿಡಿದು ಬೈಕು-ಕಾರು-ಕಂಪ್ಯೂಟರಿನವರೆಗೂ. ಕೊನೆಗೆ ಏನಾಯಿತು ಅಂತ ಎಲ್ಲರಿಗೂ ಗೊತ್ತು. ಆ ದೇಶ ವಿಶ್ವಶಕ್ತಿಯಾಗಿದ್ದರೂ 1991ರಲ್ಲಿ ಸಂಪೂರ್ಣವಾಗಿ ಕುಸಿದು ಬಿತ್ತು. ಒಂದು ಅರ್ಥವ್ಯವಸ್ಥೆಯ (ಇಲ್ಲಿ ಸಮಾಜವಾದ) ಅದಕ್ಷತೆಯನ್ನು ಸಾಬೀತು ಪಡಿಸಿಲು ಇದಕ್ಕಿಂತ ಬಲವಾದ ಸಾಕ್ಷಿ ಸಿಗುವುದು ಅಸಾಧ್ಯ.
ಅಧಿಕ ಬೆಲೆಗಳಿಗೆ ಪರಿಹಾರ ಸರ್ಕಾರಿ ನಿಯಂತ್ರಣ ಅಲ್ಲ. ಅಧಿಕ ಬೆಲೆ ಸಮಸ್ಯೆ ಅಲ್ಲ - ಅದು ಕೇವಲ ಸಮಸ್ಯೆಯ ಲಕ್ಷಣ. ನಿಜವಾದ ಸಮಸ್ಯೆ ಎಂದರೆ ಕಡಿಮೆ ಉತ್ಪಾದನೆ. ಮತ್ತು ಇದಕ್ಕೆ ಕಾರಣ ಕ್ಷೇತ್ರದಲ್ಲಿ ಮುಕ್ತ ಸ್ಫರ್ಧೆ ಇಲ್ಲದಿರುವುದು ಹಾಗೂ ಹೊಸ ಉತ್ಪಾದಕರಿಗೆ ಸುಲಭ ಪ್ರವೇಶ ಇಲ್ಲದಿರುವುದು. ಆದ್ದರಿಂದ ನಿಜವಾದ ಪರಿಹಾರ ಎಂದರೆ ಕ್ಷೇತ್ರದಲ್ಲಿ ಮುಕ್ತ ಸ್ಫರ್ಧೆ ಮತ್ತು ಹೊಸ ಉತ್ಪಾದಕರಿಗೆ ಸುಲಭ ಪ್ರವೇಶ ತರುವುದು. ಆಗ ಉತ್ಪಾದನೆಯೂ ಹೆಚ್ಚುತ್ತದೆ ಮತ್ತು ಬೆಲೆಗಳೂ ಇಳಿಯುತ್ತವೆ. ಇದರ ಬದಲು ಏನಾದರೂ ಸರ್ಕಾರ ಬೆಲೆಗಳನ್ನು ನಿಯಂತ್ರಿಸಿದರೆ, ಅದು ಒಬ್ಬ ರೋಗಿಗೆ ಔಷಧಿಯ ಬದಲು ವಿಷ ಕುಡಿಸಿದಂತಾಗುತ್ತದೆ.
Subscribe to:
Post Comments (Atom)
No comments:
Post a Comment