ಸಮಾಜದಲ್ಲಿ ಅನೇಕ ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಕೃಷಿಗೆ ರೈತರು ಟ್ರ್ಯಾಕ್ಟರುಗಳನ್ನು ಖರೀದಿಸುತ್ತಾರೆ, ಕೈಗಾರಿಕೆಗೆ ಉದ್ಯಮಿಗಳು ಕಾರ್ಖಾನೆಗಳನ್ನು ಕಟ್ಟಿಸುತ್ತಾರೆ, ವಾಣಿಜ್ಯಕ್ಕೆ ವ್ಯಾಪಾರಿಗಳು ಕಂಪನಿಗಳನ್ನು ಶುರು ಮಾಡುತ್ತಾರೆ. ಈ ಆರ್ಥಿಕ ಚಟುವಟಿಕೆಗಳು ಆರಂಭವಾದ ನಂತರ ಆದಾಯ ಗಳಿಸುತ್ತವೆ. ಆದರೆ ಅವುಗಳನ್ನು ಆರಂಭಿಸಲು ಹಣ ಬೇಕು. ಈ ಹಣ ಎಲ್ಲಿಂದ ಬರುತ್ತದೆ? ಶ್ರೀಮಂತರ ಬಳಿ ಹಣ ಇದೆ, ಆದರೆ ಸಾಮಾನ್ಯ ಜನರ ಬಳಿ ಇಲ್ಲ. ಆದ್ದರಿಂದ, ಸಾಮಾನ್ಯ ಜನರಿಗೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಹಣ ಕೊಡಿಸುವ ಒಂದು ವ್ಯವಸ್ಥೆ ಬೇಕು. ಆ ವ್ಯವಸ್ಥೆಯೇ ಹಣಕಾಸು ವ್ಯವಸ್ಥೆ.
ಶರೀರ ಕೆಲಸ ಮಾಡಲು ಅದರ ಜೀವಕೋಶಗಳಿಗೆ ರಕ್ತ ಬೇಕು. ರಕ್ತಪರಿಚಲನಾ ವ್ಯವಸ್ಥೆ ಶರೀರದ ಜೀವಕೋಶಗಳಿಗೆ ರಕ್ತ ತಲುಪಿಸುತ್ತದೆ. ಶರೀರಕ್ಕೆ ರಕ್ತ ಹೇಗೋ, ಅರ್ಥವ್ಯವಸ್ಥೆಗೆ ಹಣ ಹಾಗೆಯೇ. ಅರ್ಥವ್ಯವಸ್ಥೆ ಕೆಲಸ ಮಾಡಲು ಅದಕ್ಕೆ ಹಣ ಬೇಕು. ಈ ಹಣವನ್ನು ಪೂರೈಸುವುದು ಹಣಕಾಸು ವ್ಯವಸ್ಥೆ. ಅಂದರೆ - ಶರೀರಕ್ಕೆ ರಕ್ತಪರಿಚಲನಾ ವ್ಯವಸ್ಥೆ ಹೇಗೋ, ಅರ್ಥವ್ಯವಸ್ಥೆಗೆ ಹಣಕಾಸು ವ್ಯವಸ್ಥೆ ಹಾಗೆಯೇ. ಅಥವಾ - ಹಣಕಾಸು ವ್ಯವಸ್ಥೆ ಅರ್ಥವ್ಯವಸ್ಥೆಯ ರಕ್ತಪರಿಚಲನಾ ವ್ಯವಸ್ಥೆ ಇದ್ದ ಹಾಗೆ. ಹಣಕಾಸು ವ್ಯವಸ್ಥೆಯ ಪ್ರಮುಖ ಭಾಗ ಎಂದರೆ ಬ್ಯಾಂಕುಗಳು. ಬೇರೆ ಭಾಗಗಳೂ ಇವೆ, ಉದಾಹರಣೆ: ಶೇರುಮಾರುಕಟ್ಟೆ.
ಜನ ತಮ್ಮ ಉಳಿತಾಯವನ್ನು ಬ್ಯಾಂಕುಗಳಲ್ಲಿ ಇಡುತ್ತಾರೆ. ಬ್ಯಾಂಕುಗಳು ಈ ಹಣವನ್ನು ಅವಶ್ಯಕತೆ ಇರುವವರಿಗೆ (ರೈತರು, ಉದ್ಯಮಿಗಳು, ವ್ಯಾಪಾರಿಗಳು) ಸಾಲದ ರೂಪದಲ್ಲಿ ನೀಡುತ್ತವೆ. ನಂತರ ಇವರು ತಮ್ಮ ಆರ್ಥಿಕ ಚಟುವಟಿಕೆಗಳಿಂದ ಬಂದ ಆದಾಯದಿಂದ ಬ್ಯಾಂಕುಗಳಿಗೆ ತಾವು ತೆಗೆದುಕೊಂಡ ಸಾಲಗಳನ್ನು ತೀರಿಸುತ್ತಾರೆ. ಹೀಗೆ ಹಣಕಾಸು ವ್ಯವಸ್ಥೆಯ ಈ ಚಕ್ರ ತಿರುಗುತ್ತಲೇ ಇರುತ್ತದೆ. ಮತ್ತು ಅರ್ಥವ್ಯವಸ್ಥೆಯ ಯಂತ್ರ ನಡೆಯುತ್ತಲೇ ಇರುತ್ತದೆ.
ಈಗ ಸಾಲ ಮನ್ನಾ ಮಾಡಿದರೆ ಏನಾಗುತ್ತದೆ? ಆಗ ಸಾಲ ತೆಗೆದುಕೊಂಡವರು ತಮ್ಮ ಸಾಲಗಳನ್ನು ತೀರಿಸ ಬೇಕಾಗಿಲ್ಲ. ಅದರ ಪರಿಣಾಮ ಏನಾಗುತ್ತದೆ? ಆಗ ಬ್ಯಾಂಕುಗಳು ಸಾಲಗಳನ್ನು ಕೊಡುವುದನ್ನು ನಿಲ್ಲಿಸುತ್ತವೆ. ಅಂದರೆ ಹಣಕಾಸು ವ್ಯವಸ್ಥೆಯ ಚಕ್ರ ತಿರುಗುವುದು ನಿಲ್ಲುತ್ತದೆ. ಯಾರಿಗೆ ಆರ್ಥಿಕ ಚಟುವಟಿಕೆಗಳಿಗೆ ಹಣ ಬೇಕು (ರೈತರು, ಉದ್ಯಮಿಗಳು, ವ್ಯಾಪಾರಿಗಳು) ಅವರಿಗೆ ಅದು ಸಿಗುವುದಿಲ್ಲ. ಆಗ ಅವರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿರುವುದಿಲ್ಲ. ರೈತರು ಟ್ರ್ಯಾಕ್ಟರುಗಳನ್ನು ಖರೀದಿಸಲು ಆಗಲ್ಲ, ಉದ್ಯಮಿಗಳು ಕಾರ್ಖಾನೆಗಳನ್ನು ಕಟ್ಟಿಸಲು ಆಗಲ್ಲ, ವ್ಯಾಪಾರಿಗಳು ಕಂಪನಿಗಳನ್ನು ಶುರು ಮಾಡಲು ಆಗಲ್ಲ. ಅಂದರೆ - ಇಡೀ ಅರ್ಥವ್ಯವಸ್ಥೆಯ ಯಂತ್ರವೇ ನಿಂತು ಹೋಗುತ್ತದೆ.
'ಅರ್ಥವ್ಯವಸ್ಥೆ' ಎಂದರೆ ದೊಡ್ಡ ಕಂಪನಿಗಳ ದೊಡ್ಡ ಅಧಿಕಾರಿಗಳು ದೊಡ್ಡ ಕಚೇರಿಗಳಲ್ಲಿ ಕುಳಿತಿರುವುದು ಅಲ್ಲ. ಅಥವಾ ಶೇರುಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೂಗಾಡುವುದು ಅಲ್ಲ. ಅರ್ಥವ್ಯವಸ್ಥೆ ಎಂದರೇನು? ರೈತರು ತಮ್ಮ ಹೊಲ-ಗದ್ದೆ-ತೋಟಗಳಲ್ಲಿ ಅಕ್ಕಿ-ಬೇಳೆ-ತರಕಾರಿಗಳನ್ನು ಬೆಳೆಯುತ್ತಾರೆ. ಇದು ಅರ್ಥವ್ಯವಸ್ಥೆ. ಮತ್ತು ನಾವು ನಮ್ಮ ಕಚೇರಿ-ಕಾರ್ಖಾನೆಗಳಲ್ಲಿ ಕೆಲಸ ಮಾಡಿ, ಸಂಬಳ ಪಡೆದು, ಈ ಸಂಬಳದಿಂದ ಆ ಅಕ್ಕಿ-ಬೇಳೆ-ತರಕಾರಿಗಳನ್ನು ಕೊಳ್ಳುತ್ತೇವೆ. ಇದು ಅರ್ಥವ್ಯವಸ್ಥೆ. ಈ ವ್ಯವಸ್ಥೆ ಇಲ್ಲದೆ ನಾವು ಬದುಕುವುದೂ ಸಾಧ್ಯವಿಲ್ಲ. ಆದರೆ ನಾವು ಈ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲ. ನಾವು ಏನು ಮಾಡಿದರೂ ಈ ವ್ಯವಸ್ಥೆ ಸರಿಯಾಗಿಯೇ ನಡೆಯುತ್ತದೆ ಎಂದು ಭಾವಿಸಿದ್ದೇವೆ. ಇದಕ್ಕಿಂತ ದೊಡ್ಡ ಭ್ರಮೆ ಇನ್ನೊಂದಿಲ್ಲ. ಈ ವ್ಯವಸ್ಥೆಯ ಕೆಲವು ಆಧಾರಸ್ತಂಭಗಳಿವೆ. ಅವುಗಳಲ್ಲಿ ಒಂದು ಎಂದರೆ: ಸಾಲ ತೆಗೆದುಕೊಂಡವನು ತನ್ನ ಸಾಲವನ್ನು ತೀರಿಸಬೇಕೆಂಬ ಪವಿತ್ರ ಧರ್ಮ. ಸಾಲ ಮನ್ನಾ ಈ ಆಧಾರಸ್ತಂಭವನ್ನು ಚೂರುಚೂರು ಮಾಡುತ್ತದೆ. ಇದರಿಂದ ಇಡೀ ಅರ್ಥವ್ಯವಸ್ಥೆಯೇ ಕುಸಿದು ಬೀಳುತ್ತದೆ.
ನಮ್ಮ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ, ನಿಜ. ನಾವು ಅವರಿಗೆ ಪರಿಹಾರ ನೀಡಲೇಬೇಕು. ಆದರೆ ಸಾಲ ಮನ್ನಾ ಎಲ್ಲಕ್ಕಿಂತ ನಿರುಪಯೋಗಿ ಹಾಗೂ ಹಾನಿಕರ 'ಪರಿಹಾರ'. ಏಕೆಂದರೆ ಸಾಲ ಮನ್ನಾ ಅರ್ಥವ್ಯವಸ್ಥೆಯನ್ನು ನಾಶ ಮಾಡುತ್ತದೆ, ಮತ್ತು ರೈತರು ಅರ್ಥವ್ಯವಸ್ಥೆಯಲ್ಲಿ ಅತಿ ಸೂಕ್ಷ್ಮ ಸ್ಥಿತಿಯಲ್ಲಿರುವುದರಿಂದ ಅವರಿಗೇ ಇದರಿಂದ ಹೆಚ್ಚು ಹಾನಿ ಆಗುತ್ತದೆ. ನಮಗೆ ರೈತರ ಬಗ್ಗೆ ಅಷ್ಟೊಂದು ಕನಿಕರ ಇದ್ದರೆ, ನಾವು ಎಲ್ಲಾ ರೈತರಿಗೆ ಸಹಾಯಧನ ನೀಡಬೇಕು. ಯಾರು ತಮ್ಮ ಸಾಲಗಳನ್ನು ತೀರಿಸಿದ್ದಾರೋ, ಅವರಿಗೂ ನೀಡಬೇಕು. ಅಷ್ಟೇ ಅಲ್ಲ - ಯಾರು ಸಾಲವನ್ನೇ ಮಾಡಿಲ್ಲವೋ, ಅವರಿಗೂ ನೀಡಬೇಕು. ಆಗ ಹಣಕಾಸು ವ್ಯವಸ್ಥೆ ಮತ್ತು ಅರ್ಥವ್ಯವಸ್ಥೆಯನ್ನು ನಾಶ ಮಾಡದೇ ರೈತರಿಗೆ ಸಹಾಯ ಮಾಡಿದಂತಾಗುತ್ತದೆ.
Subscribe to:
Post Comments (Atom)
No comments:
Post a Comment